Saturday, April 18, 2020

ತಬ್ಬಲಿ …

"ತಬ್ಬಲಿ"....

"ಅಪ್ಪಾ ನಂದು ಲಾಸ್ಟ್ ಸೆಮ್ ರೆಸಲ್ಟ್ ಬಂತು, ಈ ಸಾರಿನೂ ಡಿಸ್ಟಿಂಕ್ಷನ್ ನಲ್ಲಿ ಆಗಿದೆ." ಎಂದು ಮಗ ಪೋನಿನಲ್ಲಿ ಹೇಳಿದಾಗ ಸಾಂಬಶಿವರಾಯರಿಗೆ ಸಂತಸದಿಂದ ಕಣ್ಣಲ್ಲಿ ನೀರುಕ್ಕಿತು. ತಾವು ಇಷ್ಟು ದಿನ ಪಟ್ಟ ಶ್ರಮ, ಕನಸುಗಳಿಗೆ ದೇವರು ಫಲ ಕೊಟ್ಟಿದ್ದಾನೆ ಅನ್ನಿಸಿತು. ಕಣ್ಣೊರೆಸಿಕೊಳ್ಳುತ್ತಲೇ "ಹೌದಾ, ತುಂಬ ಸಂತೋಷವಾಯಿತು ಕಣೋ. ಅಮ್ಮನಿಗೂ ಹೇಳ್ತೀನಿ ಖುಷಿ ಪಡ್ತಾಳೆ, ನೀನು ಹೇಗೂ ನಾಡಿದ್ದು ಹಬ್ಬಕ್ಕೆ ಬರ್ತೀಯಲ್ಲ, ಹುಷಾರು" ಅನ್ನುತ್ತಾ ಒಳಗಿದ್ದ ಮಡದಿಯೊಂದಿಗೆ ಸಂತೋಷ ಹಂಚಿಕೊಳ್ಳಲು ಒಳನಡೆದರು.
ರಾಯರಿಗೆ ಈಗ ಅರವತ್ತರ ಸನಿಹ. ಇನ್ನೇನು ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. ಕಡು ಬಡತನದಲ್ಲಿ ಇದ್ದರೂ ಕಷ್ಟ ಪಟ್ಟು ಓದಿದ್ದರಿಂದಾಗಿ ಕೇಂದ್ರಸ್ವಾಮ್ಯದ ಸರ್ಕಾರಿ ಸಂಸ್ಥೆಯಲ್ಲಿ ವಶೀಲಿ ಇಲ್ಲದೆ ಕೆಲಸ ಸಿಕ್ಕಿತ್ತು. ಓದುತ್ತಿರುವಾಗಲೇ ತಂದೆ ತಾಯಿಗಳು ತೀರಿಕೊಂಡಿದ್ದರಿಂದ ಮೈಸೂರಿನ ಹಾಸ್ಟೆಲ್ ಒಂದರಲ್ಲಿ ಯಾರೋ ಪುಣ್ಯಾತ್ಮರು ಉಚಿತ ಸೀಟು ಕೊಡಿಸಿದ್ದರಿಂದ ವಿದ್ಯಾಭ್ಯಾಸ ಪೂರ್ಣವಾಗಿತ್ತು. ಒಳ್ಳೆಯ ಕೆಲಸವಿದ್ದರಿಂದ, ಅನಾಥನಾದರೂ, ಹಿರೇಗದ್ದೆಯ ರಾಮಕೃಷ್ಣಯ್ಯ ತಮ್ಮ ಮಗಳು ಗಿರಿಜಳನ್ನು ಕೊಟ್ಟು ಮದುವೆ ಮಾಡಿದ್ದರು. ಮದುವೆಯಾದ ಮೇಲೆ ಬೆಳಗಾವಿಯಿಂದ ಹರಿಹರಕ್ಕೆ ವರ್ಗಾಯಿಸಿಕೊಂಡು ಅಲ್ಲಿಯೇ ನೆಲೆಸಿದ್ದರು. ಮರು ವರ್ಷದಲ್ಲಿಯೇ ಮಹೀಧರ ಹುಟ್ಟಿದ್ದು. ಅವನೂ ಓದಿನಲ್ಲಿ ಚೂಟಿಯಾಗಿ ಪಿ.ಯು.ಸಿ.ಯಲ್ಲಿ ಉತ್ತಮ ಅಂಕಗಳಿಸಿ ಸಿ.ಇ.ಟಿ ಯಲ್ಲಿ ಒಳ್ಳೆ ರ್ಯಾಂಕ್ ಬಂದಿದ್ದರಿಂದಾಗಿ ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನಲ್ಲಿ ಸೀಟೂ ಸಿಕ್ಕಿ ಪ್ರತಿ ವರ್ಷವೂ ಡಿಸ್ಟಿಂಕ್ಷನ್ ನಲ್ಲೇ ಪಾಸಾಗುತ್ತಿದ್ದ. ಅವನು ಹೈಸ್ಕೂನಲ್ಲಿರುವಾಗನಲ್ಲಿರುವಾಗಲೇ ಕೋಲಾರದ ಘಟಕಕ್ಕೆ ಎರಡು ವರ್ಷ ವರ್ಗಾವಣೆಯಾದಾಗಲೂ ಅವನ ಓದಿಗೆ ತೊಂದರೆ ಆಗದಿರಲೆಂದು ತಾವೊಬ್ಬರೇ ಕೋಲಾರದಲ್ಲಿ ನೆಲೆಸಿ ಎರಡು ವರ್ಷ ಹಾಗೂ ಹೀಗೂ ಕಳೆದು ಬಂದಿದ್ದರು. ಕೋಲಾರದಲ್ಲಿ ಇವರ ಕೋಣೆಯ ಪಕ್ಕದಲ್ಲಿಯೇ ಇದ್ದ ನರ್ಸ್ ಒಬ್ಬಳು ಗಂಡನನ್ನು ಕಳೆದುಕೊಂಡ ಮೇಲೆ ಮಗನನ್ನು ಓದಿಸಲು ಪರದಾಡುತ್ತಿದ್ದಾಗ ಇವರು ಅವಳಿಗೆ ಸಹಾಯ ಮಾಡಿದ್ದರಿಂದಾಗಿ ಊಟ ತಿಂಡಿ ಅವರ ಮನೆಯಿಂದಲೇ ಸರಬರಾಜಾಗುತ್ತಿತ್ತು. ಇವರಿಗೂ ಹೊರಗಿನ ಊಟಕ್ಕಿಂತ ಇದೇ ಉತ್ತಮ ಎನ್ನಿಸಿತ್ತು ಎರಡು ವರ್ಷ ಕಳೆದಿದ್ದು ಗೊತ್ತಾಗಲಿಲ್ಲ. ಅಂತೂ ಅವನ ಓದು ಒಂದು ಹಂತಕ್ಕೆ ಬಂದಿದ್ದರಿಂದ ಇವರು ಸದ್ಯದಲ್ಲಿಯೇ ನಿವೃತ್ತರಾಗಲಿರುವುದರಿಂದ ಮುಂದೆ ಓದಿಸುವ ಬಗ್ಗೆ ಯೋಚಿಸಿರಲಿಲ್ಲ. ಅವನೊಂದು ಕೆಲಸ ಹಿಡಿದು ನೆಲೆ ನಿಂತರೆ ಸಾಕು ಅನ್ನಿಸಿತ್ತು.

"ಹಬ್ಬ ಬಂತೆಂದರೆ ಬಸ್, ರೈಲಿನಲ್ಲಿ ಅದೇನು ರಷ್ ಅಪ್ಪಾ, ಬರೀ ಜನ. ಅದೂ ಕೊಳಕು ಎಲ್ಲೆಂದರಲ್ಲಿ ಉಗಿಯುತ್ತಿರುತ್ತಾರೆ, ಬರಬೇಕಾದರೆ ಸಾಕಾಯಿತು" ಎಂದು ಬ್ಯಾಗನ್ನು ಸೋಫಾ ಮೇಲೆ ಕುಕ್ಕಿ ಕುಳಿತ ಮಗನನ್ನೇ ನೋಡುತ್ತಾ ರಾಯರೆಂದರು "ಹೌದು ಕಣಪ್ಪಾ, ಮನೆ ಮಂದಿಯನ್ನು ಬಿಟ್ಟು ಇರುತ್ತಾರಲ್ಲ. ಈ ಹಬ್ಬದ ಸಂದರ್ಭದಲ್ಲಿಯಾದರೂ ಅವರೊಡನೆ ಕಾಲಕಳೆಯುವ ಅಂತ ಜನಕ್ಕೆ ಧಾವಂತ , ಏಳು ಕೈಕಾಲು ತೊಳೆದುಕೋ ಅಮ್ಮಾ ಅಕ್ಕಿರೊಟ್ಟಿ ಚಟ್ನಿ ಮಾಡಿ ಕಾಯ್ತಿದಾಳೆ, ತಿಂಡಿ ತಿನ್ನೋಣ " ಎಂದರು.

"ಮಹೀ ಎಷ್ಟು ಬಡವಾಗಿದೀಯಲ್ಲೋ, ಹಾಸ್ಟೆಲ್ ಊಟ ಮೈಗೆ ಹಿಡೀತಾ ಇಲ್ವಾ? ತಿಂಡಿ ತಿನ್ನು, ಆಮೇಲೆ ಎಣ್ಣೆ ಹಚ್ಚುತ್ತೇನೆ , ಚೆನ್ನಾಗಿ ಬಿಸಿನೀರು ಸ್ನಾನ ಮಾಡುವಿಯಂತೆ." ಎಂದ ಗಿರಿಜಮ್ಮ ಲಗುಬಗೆಯಿಂದ ಮಗನಿಗೆ ತಿಂಡಿ ಬಡಿಸಲು ಅನುವಾದರು.

ಮಧ್ಯಾಹ್ನ ಊಟವಾದ ಮೇಲೆ ರಾಯರು " ಮುಂದೇನು ಮಾಡ್ಬೇಕು ಅಂತಿದೀಯಾ? ಯಾವುದಾದರೂ ಕಂಪನಿಗೆ ಹಾಕಿಕೊಂಡಿದ್ದೀಯಾ? ಎಂದರು. "ಇಲ್ಲಪ್ಪಾ, ಕಂಪನಿ ಕೆಲಸಕ್ಕೆ ಹೋಗುವುದಾದರೆ ಕ್ಯಾಂಪಸ್ ನಲ್ಲಿಯೇ ಬಂದಿತ್ತು. ನಾನು ಎಂ.ಎಸ್. ಮಾಡೋಣ ಅಂತಿದೀನಿ, ಕೆನಡಾದಲ್ಲಿ. ಪ್ರಾಸ್ಪೆಕ್ಟಸ್ ಎಲ್ಲಾ ತಂದಿದ್ದೀನಿ" ಎನ್ನುತ್ತಾ ಬ್ಯಾಗ್ ಬಿಚ್ಚ ತೊಡಗಿದ. ಇದರ ಬಗ್ಗೆ ತನಗೆ ಸುಳಿವೂ ಕೊಡದೆ ಒಂದು ಮಾತೂ ಕೇಳದ ಬಗ್ಗೆ ರಾಯರಿಗೆ ಪಿಚ್ಚೆನಿಸಿದರೂ ತೋರಿಸಿಕೊಳ್ಳದೇ " ಅದಕ್ಕೆ ತುಂಬಾ ದುಡ್ಡು ಖರ್ಚಾಗುತ್ತೇನೋ ಅಲ್ವಾ? ನನಗೆ ನಿವೃತ್ತಿಯಾಗುವುದರಿಂದ ಬ್ಯಾಂಕಿನಲ್ಲಿ ಸಾಲವೂ ಸಿಗಲಾರದು " ಎಂದರು.
 
"ನೀನೇನೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಡಪ್ಪ. ಅವರೇ ಸ್ಕಾಲರ್ಶಿಪ್ ಕೊಡ್ತಾರೆ. ತಿಂಗಳಿಗೆ ಮೂರು ಸಾವಿರ ಕೆನಡಿಯನ್ ಡಾಲರ್, ಅಂದರೆ ಹತ್ತಿರ ಹತ್ತಿರ ಒಂದುವರೆ ಲಕ್ಷ ರೂ. ಅಪ್ಪಾ. ಅಲ್ಲಿ ಖರ್ಚೂ ಹಾಗೇ ಇರುತ್ತೆ ಆದರೆ ಸಾಕಾಗುತ್ತೆ. ಎರಡು ವರ್ಷ ಆದಮೇಲೆ ಅವರೇ ಕೆಲಸ ಕೊಡುತ್ತಾರೆ. ವಾರ್ಷಿಕ ಒಂದು ಕಾಲು ಲಕ್ಷ ಡಾಲರ್ ಪ್ಯಾಕೇಜ್" ಎಂದು ಕಣ್ಣರಳಿಸಿದ. " ನೀನು ಇಲ್ಲಿಂದ ಪ್ರಯಾಣಿಸುವ ಮತ್ತಿತರ ಖರ್ಚು ನೋಡಿಕೊಂಡರೆ ಸಾಕು" ಎಂದ, ರಾಯರು ಮೌನವಾದರು.
 
ರಾತ್ರಿ ಮಲಗಿದಾಗ ಹೆಂಡತಿಯೊಡನೆ ವಿಷಯವೆಲ್ಲಾ ವಿವರಿಸಿದಾಗ ಗಿರಿಜಮ್ಮಾ "ಅವನು ಎಲ್ಲಾ ನಿರ್ಧರಿಸಿ ಕೊಂಡ ಮೇಲೆ ನಾವು ಬೇಡ ಎಂದರೆ ಕೇಳುತಾನೆಯೇ? " ಎಂದರು. ಇದುವರೆಗೆ ಕೂಡಿಟ್ಟ ಹಣದಲ್ಲಿ ಮಡದಿಗೆ ಎರಡು ಜೊತೆ ಬಳೆ ಮಾಡಿಸಿದರಾಯಿತು ಈಗ ಬಂಗಾರದ ಬೆಲೆ ಗಗನಕ್ಕೇರಿದಿಯಲ್ಲಾ ಸ್ವಲ್ಪ ಇಳಿದ ಮೇಲೆ ನೋಡೋಣ ಎಂದು ಕೊಂಡಿದ್ದ ರಾಯರಿಗೆ ಈಗ ಆ ಯೋಜನೆ ಕೈಬಿಡುವುದು ಅನಿವಾರ್ಯ ಎನ್ನಿಸಿತು. ಗಿರಿಜಮ್ಮನ ತುರ್ತು ಚಿಕಿತ್ಸೆಗಳಿಗಾಗಿ ಸ್ವಲ್ಪ ತೆಗೆದಿಟ್ಟು ಕೊಂಡರೆ ಉಳಿದ ಎರಡು ಮೂರು ಲಕ್ಷವಾದರೂ ಈಗ ಸದ್ಯಕ್ಕೆ ಅವನ ಖರ್ಚಿಗೆ ತೆಗೆದಿರಿಸಬೇಕು ಅಂತ ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿದರು. "ವೀಸಾ, ಪಾಸ್ ಪೋರ್ಟ್ ಮಾಡಿಸಬೇಕಪ್ಪ" ಎಂದು ಮರುದಿನವೇ ಹೊರಟು ನಿಂತ ಮಗನನ್ನು ತಡೆಯಬೇಕು ಅನ್ನಿಸಲಿಲ್ಲ. ಅವನ ಖಾತೆಗೆ ಸ್ವಲ್ಪ ಹಣ ಹಾಕಿ "ಹುಷಾರಾಗಿ ಹೋಗಪ್ಪಾ " ಎಂದು ಕಳಿಸಿಕೊಟ್ಟರು.
 
ಮರುವಾರದಲ್ಲಿಯೇ "ಕೆನಡಾದಲ್ಲಿ ಎಂ.ಎಸ್. ಗೆ ಸೀಟು ಸಿಕ್ಕಿತಪ್ಪಾ, ಮುಂದಿನ ತಿಂಗಳು ಮೊದಲ ವಾರ ಜಾಯಿನ್ ಆಗಬೇಕು, ವೀಸಾ ಪಾಸ್ ಪೋರ್ಟ್ ಬಂದಿದೆ, ವಿಮಾನ ಟಿಕೆಟ್ ಬುಕ್ ಮಾಡ ಬೇಕು ಅಂದಾಗ ರಾಯರು ಬ್ಯಾಂಕಿನಿಂದ ಅವನಿಗೆ ಬೇಕಾದಷ್ಟು ಹಣವನ್ನು ವರ್ಗಾಯಿಸಿದರು. ಮುಂದೆ ಎರಡು ಮೂರು ವಾರ ಕಳೆದದ್ದೇ ಗೊತ್ತಾಗಲಿಲ್ಲ. ಬೇಡ ಬೇಡವೆಂದರೂ ಗಿರಿಜಮ್ಮ "ದಾರಿಯಲ್ಲಿ ತಿನ್ನಲಿಕ್ಕಾಗುತ್ತೆ" ಅಂತಾ ನಿಪ್ಪಟ್ಟು, ಚಕ್ಕುಲಿ ಕೋಡುಬಳೆಯ ಬಾಕ್ಸ್ ರೆಡಿ ಮಾಡಿದ್ದರು.
 
"ಫೋನ್ ಮಾಡ್ತಾ ಇರೋ, ಅಲ್ಲಿ ಇಲ್ಲಿ ಜಾಸ್ತಿ ತಿರಗಬೇಡಾ, ಊಟ ತಿಂಡಿ ಸರಿ ಮಾಡು, ಇಂಡಿಯನ್ ಫುಡ್ ಸಿಗುತ್ತೆ ಅಲ್ವಾ, ರುಕ್ಮಣಕ್ಕನ ಸೋದರಮಾವನ ಮಗಳು ಅಲ್ಲಿ ಎಲ್ಲೋ ಇರೋದಂತೆ ಬಿಡುವಾದಾಗ ಹೋಗಿ ಬರ್ತಾಯಿರು" ವಿಮಾನ ಹತ್ತುವರೆಗೂ ಗಿರಿಜಮ್ಮನ ಉಪದೇಶ ನಡೆದೇ ಇತ್ತು. ಅವನನ್ನು ಕಳಿಸಿಕೊಟ್ಟು ರಾತ್ರಿಯ ರೈಲಿನಲ್ಲಿ ಹರಿಹರಕ್ಕೆ ದಂಪತಿಗಳಿಬ್ಬರೂ ವಾಪಾಸು ಬಂದರು
 
ಮುಂದೆ ಕೆಲವು ವಾರ ಆಗಾಗ್ಗೆ ಫೋನ್ ಮಾಡುತ್ತಿದ್ದವ ಆಮೇಲೆ ತಿಂಗಳಿಗೊಮ್ಮೆ ಮಾಡಿದರೆ ಹೆಚ್ಚು. "ಬಲಿತ ಹಕ್ಕಿಗಳು ಗೂಡಲ್ಲಿರುತ್ವೇ? ನಾವೇ ಹೊಂದ್ಕೋಬೇಕು ಅಂತ ಮಡದಿಯನ್ನು ರಾಯರು ಸಮಾಧಾನಿಸುತ್ತಿದ್ದರು. ಎರಡು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ಅಷ್ಟರಲ್ಲಿ ರಾಯರಿಗೆ ನಿವೃತ್ತಿಯೂ ಆಗಿ ಕೈಗೆ ಒಂದಷ್ಟು ಗಂಟೂ ಬಂದಿತ್ತು. ಮಗನಿಗೆ ಏನೂ ಕಳಿಸಬೇಕಿಲ್ಲದುದರಿಂದ, ನಿತ್ಯದ ಖರ್ಚಿಗೆ ನಿವೃತ್ತಿ ವೇತನವಿದ್ದುದರಿಂದ ಬಂದ ದುಡ್ಡಿನಲ್ಲಿ ಪೇಟೆಯಲ್ಲಿ ಒಂದು ದೊಡ್ಡ ಮನೆಯನ್ನೇ ಕೊಂಡು ಕೊಂಡರು. ಅಲ್ಲಿ ವಾಸಿಸುತ್ತಿದ್ದ ಇವರ ಸಹೋದ್ಯೋಗಿಯೊಬ್ಬರು ಮಗನೊಂದಿಗೆ ವಿದೇಶಕ್ಕೆ ತೆರಳಿದ್ದುದರಿಂದ ಸ್ವಲ್ಪ ಕಡಿಮೆ ಬೆಲೆಗೇ ಇವರಿಗೆ ಮಾರಿದ್ದರು. ಪಕ್ಕದಲ್ಲಿಯೇ ಒಂದು ದೊಡ್ಡ ನರ್ಸಿಂಗ್ ಹೋಮ್ ಇದ್ದುದರಿಂದ ರಾಯರಿಗೆ ಇಳಿವಯಸ್ಸಿನಲ್ಲಿ ಇದೇ ಸೂಕ್ತ ಜಾಗ ಎನ್ನಿಸಿ ಅದನ್ನು ಕೊಂಡು ಕೊಂಡರು. ಮಗನಿಗೆ ತಿಳಿಸಿದಾಗ " ಈಗ್ಯಾಕೆ ತೆಗೆದುಕೊಳ್ಳ ಬೇಕಿತ್ತಪ್ಪ? " ಎಂದು ಸುಮ್ಮನಾಗಿದ್ದ. "ಗೃಹಪ್ರವೇಶ ಮಾಡೋಣ ಬಾರೋ ಅಂತ ಅಮ್ಮ ಕರೆದರೂ ನನಗೀಗ ಪುರುಸೊತ್ತಿಲ್ಲ" ಎಂದು ಜಾರಿ ಕೊಂಡಿದ್ದ.

ಒಂದು ದಿನ ಮಹೀಧರ ಫೋನ್ ಮಾಡಿ " ಅಪ್ಪಾ ನನಗೆ ಇಲ್ಲಿಯೇ ಕಂಪನಿಯೊಂದರಲ್ಲಿ ಇಂಟರ್ನ್ ಶಿಪ್ ಸಿಕ್ಕಿದೆ. ಮುಂದೆ ಅಲ್ಲಿಯೇ ಕೆಲಸ ಅಂದ. "ಊರಿಗೆ ಯಾವಾಗ ಬರ್ತೀಯೋ? ನಿನಗೊಂದು ಮದುವೆ ಮಾಡಬೇಕು ಅಂತಾ ನಿನ್ನಮ್ಮ ತುದಿಗಾಲಲ್ಲಿ ನಿಂತಿದಾಳೆ" ಎಂದಾಗ ಮಾತನಾಡದೆ ಫೋನ್ ಇಟ್ಟಿದ್ದ. ಮತ್ತೊಂದು ದಿನ ಫೋನ್ ಮಾಡಿ " ಅಪ್ಪಾ ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು, ಫ್ರೀ ಇದೀರಾ ? ಎಂದ. "ರಿಟೈರ್ ಆದಮೇಲೆ ಪ್ರೀನೇ ಅಲ್ವೇನಪ್ಪ ಹೇಳು" ಎಂದಾಗ ವಿವರವಾಗಿ ಹೇಳಿದ್ದಿಷ್ಟು. ಅವನ ಜೊತೆ ಕಾಲೇಜಿನಲ್ಲಿ ಓದುತ್ತಿದ್ದ ಹಿರಣ್ಮಯಿ ಎಂಬ ಹುಡುಗಿಯನ್ನು ಅವನು ಇಷ್ಟ ಪಟ್ಟಿದ್ದು ಅವಳದೂ ಈ ವರ್ಷ ಡಿಗ್ರಿ ಮುಗಿದು ಅವಳಿಗೂ ಕೆನಡಾ ದಲ್ಲಿರುವ ಕಂಪನಿಯಲ್ಲಿ ಕೆಲಸ ಸಿಕ್ಕಿದೆ ಅಂತೆ. ಅವಳನ್ನು ಮದುವೆ ಆಗುವ ಅಂತಿದೀನಿ ಅವರ ತಂದೆ ನಿಮ್ಮ ಬಳಿ ಬಂದು ಮಾತನಾಡಬಹುದು ಅಮ್ಮನಿಗೂ ಹೇಳಿ ಎಂದ. ಇವನು ನಮಗೆ ವಿಷಯವಷ್ಟೇ ತಿಳಿಸುತ್ತಿದ್ದಾನೆ ಅನುಮತಿಯೇನೂ ಕೇಳುತ್ತಿಲ್ಲ ಎಂದು ಪಿಚ್ಚೆನಿಸಿದರೂ "ಕಾಲಾಯ ತಸ್ಮೈ ನಮಃ ಎನ್ನುತ್ತಾ ಮಡದಿಯನ್ನು ಸಮಾಧಾನಿಸಿದ್ದರು". 
 
ಮಾರನೆ ದಿನ "ಸಾಂಬಶಿವರಾಯರ ಮನೆ ಇದೇನಾ ? ಎನ್ನುತ್ತಾ ದಂಪತಿಗಳಿಬ್ಬರು ಮನೆಗೆ ಬಂದರು." ನೀವು ಯಾರೋ ಗೊತ್ತಾಗಲಿಲ್ಲ ಒಳಗೆ ಬನ್ನಿ ಕುಳಿತುಕೊಳ್ಳು ಆಸರೆಗೆ ಕೊಡಲೇ " ಎಂದರು ರಾಯರು. "ನಾನು ಮಧುಕರ ಭಟ್ ಅಂತಾ, ಇವಳು ನನ್ನ ಧರ್ಮ ಪತ್ನಿ ವನಜಾಕ್ಷಿ, ನಮ್ಮದು ಶಿರಸಿ ಬಳಿಯ ಒಂದು ಹಳ್ಳಿ. ಹಿರಣ್ಮಯಿ ನಮ್ಮ ಒಬ್ಬಳೇ ಮಗಳು ಮಹೀಧರರವರು ಫೋನ್ ನಲ್ಲಿ ವಿಷಯ ತಿಳಿಸಿರಬೇಕಲ್ಲಾ? ಎಂದಾಗ ಎಲ್ಲಾ ಅರ್ಥವಾಗಿ ಎಲ್ಲದಕ್ಕೂ ತಲೆದೂಗಿದ್ದರು. ಮುಂದಿನ ತಿಂಗಳೇ ಮದುವೆ ನಿಶ್ಚಯವಾಗಿ ಶಿರಸಿಯ ಕಲ್ಯಾಣಮಂದಿರದಲ್ಲಿ ಮದುವೆಯೂ ನಡೆಯಿತು. ಮದುವೆಗೆ ಬಂದಾಗಲೂ ಸಿಡಿ ಸಿಡಿ ಅನ್ನುತ್ತಲೇ ಇದ್ದ. "ಏನು ಜನಗಳಪ್ಪಾ, ಸ್ವಲ್ಪನೂ ಶಿಸ್ತೇ ಇಲ್ಲ. ಗಲೀಜು. ಒಂದು ಪಂಕ್ತಿ ಊಟವಾದ ಮೇಲೆ ಶುಚಿ ಗೊಳಿಸುವ ಮುಂಚೆ ಬಂದು ಕೂತ್ಬಿಡ್ತಾರೆ. ಬಫೆ ಸಿಸ್ಟಮ್ಮೇ ಒಳ್ಳೇದಿತ್ತು. ಅದು ಎಷ್ಟು ಐಟಂ? ತಿನ್ನುವುದಕ್ಕೇ ಬಂದಂತಿರುತ್ತಾರೆ. THAT IS WHY I DON'T LIKE THIS DIRTY INDIA ಎಂದೆಲ್ಲಾ ಕೂಗಾಡಿದ್ದ. ಎಣ್ಣೆ ಶಾಸ್ತ್ರ ಅರಿಶಿನ ಎಲ್ಲಾ ಬೇಡವೆಂದು ಅಮ್ಮನೊಂದಿಗೂ ರೇಗಾಡಿದ್ದ, ವರಪೂಜೆ ವರನ ಕಾಲ್ತೊಳೆಯುವುದು ಇವೆಲ್ಲ HYGENIC ಅಲ್ಲ ಎಂದು ರೇಗುತ್ತಿದ್ದ ಅವನನ್ನು ಸಮಾಧಾನಿಸಲು ರಾಯರು ಹೆಣಗುತ್ತಿದ್ದರು. "ಹಾಗೆಲ್ಲ ಹೇಳ ಬಾರದಪ್ಪ. ಅವೆಲ್ಲಾ ನಮ್ಮ ಸಂಪ್ರದಾಯಗಳು, ಅಳಿಯನನ್ನೇ ದೈವ ಸ್ವರೂಪನಾಗಿ ಕಂಡು ಮಗಳನ್ನು ಒಪ್ಪಿಸುವ ಪರಿ ಅದು, ಅದರದ್ದೇ ಆದ ಅರ್ಥವಿರುತ್ತೆ" ಎಂದ ತಂದೆಗೆ "ಎಲ್ಲಾ ಬಂಡಲ್ BULLSHIT ನಾನು ಅದನ್ನೆಲ್ಲಾ ನಂಬಲ್ಲ" ಎಂದು ಕೂಗಾಡಿದ್ದ. ಅಂತೂ ಮದುವೆ ಮುಗಿಸಿ ವಾರದಲ್ಲಿಯೇ ಇಬ್ಬರೂ ಹೊರಟು ನಿಂತಾಗ ಮಡದಿಯ ಮುಖ ನೋಡುತ್ತಾ ಕಣ್ಣೊರಿಸಿಕೊಂಡ ರಾಯರನ್ನು ಯಾರೂ ಗಮನಿಸಲಿಲ್ಲ.

ಮುಂದೆಯೂ ಪೋನ್ ಮಾಡಿದ್ದು ಅಷ್ಟಕ್ಕಷ್ಟೇಯೇ. ಮರುವರ್ಷ ಹೆರಿಗೆಗಾಗಿ ತಾಯಿ ಮನೆಗೆ ಬಂದ ಸೊಸೆ ಮನೆಗೆ ಬಂದಿದ್ದು ಒಂದೆರಡು ದಿನ. ಮಳೆಗಾಲ ಕಳೆಯುವ ಮುನ್ನವೇ ಮಗ ಬಂದು ಇಲ್ಲಿದ್ದರೆ ಇನ್ಫೆಕ್ಷನ್ ಆಗುತ್ತೆ, ಆರು ತಿಂಗಳ ಮೇಲಾದರೆ ಪಾಸ್ ಪೋರ್ಟ್ಗ ಗೆ ತೊಂದರೆ ಆಗುತ್ತೆ ಅಂತ ಹೊರಡಲು ಅವಸರಿಸಿದ. ಅವಸರದಲ್ಲಿಯೇ ನಾಮಕರಣ ಶಾಸ್ತ್ರ ಮಾಡಿ ಮಗುವಿಗೆ ಶಾಲಿವಾಹನ ಎಂಬ ನಾಮಕರಣವೂ ಆಯಿತು. ದಂಪತಿಗಳು ಮಕ್ಕಳೊಂದಿಗೆ ಕೆನಡಾಕ್ಕೆ ಹಾರಿ ಆಗಿತ್ತು. ಈಗ ನೀನಲ್ಲಿ ಬಂದರೆ ನಿನ್ನ ಅಸ್ತಮಾ ಜೋರಾಗುತ್ತೆ ಮುಂದೆ ನೋಡೋಣಾ ಎಂದು ಅಮ್ಮನಿಗೆ ಹೇಳುತ್ತಿದ್ದುದನ್ನು ರಾಯರು ಮರೆಯಲ್ಲಿಯೇ ಕೇಳಿಸಿಕೊಂಡರು.
 
ದಿವಸಗಳು ಉರುಳಿದವು ಕಾಲಚಕ್ರ ತಿರುಗುತ್ತಿತ್ತು. ಮೂರನೇ ವರ್ಷದಲ್ಲಿ ಬಂದಾಗ ಮೊಮ್ಮಗನನ್ನು ಮುದ್ದಾಡುತ್ತಾ ಗಿರಿಜಮ್ಮ "ಇವನನ್ನು ಇಲ್ಲಿಯೇ ಬಿಟ್ಟು ಹೋಗೋ ಇಲ್ಲಿಯೇ ಶಾಲೆಗೆ ಸೇರಿಸಿದರಾಯಿತು ಹೇಗೂ ಹತ್ತಿರ ಇದೆ. ನಾವೇ ಕರೆದುಕೊಂಡು ಹೋಗಿ ಬರಬಹುದು ಎಂದರೆ ಮಹೀಧರ "NO WAY. ಇಲ್ಲಿ ಬಿಡೋದಾ, ಈ ಕೊಂಪೆಯಲ್ಲಿ? ನನ್ನ ಕೈಯಲ್ಲೇ ಮೂರು ದಿನ ಇರಕ್ಕೆ ಆಗಲ್ಲ. ಅವನನ್ನು ಇಲ್ಲಿ ಓದಿಸುವುದು ಸಾದ್ಯವೇ ಇಲ್ಲ". ಸೊಸೆಯೂ ಹೂಂಗುಟ್ಟಿದ್ದಳು.

ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ಗಿರಿಜಮ್ಮನಿಗೆ ಅಸ್ತಮಾ ಉಲ್ಬಣಿಸಿ ಮಗನ ಅನುಪಸ್ಥಿತಿಯಲ್ಲಿಯೇ ಕೊನೆಯುಸಿರೆಳೆದರು. ಮಹಾ ಮಾರಿಯೊಂದು ಜಗತ್ತನ್ನೆಲ್ಲಾ ವ್ಯಾಪಿಸತೊಡಗಿದಾಗ ಕೆನಡಾವೂ ಹೊರತಾಗಲಿಲ್ಲ. ವಿಶ್ವವೇ ತತ್ತರಿಸಿದ ಆರ್ಥಿಕ, ಸಾಮಾಜಿಕ ಸ್ವಾಸ್ಥ್ಯದ ಭೂಕಂಪಕ್ಕೆ ಎಲ್ಲಾ ರಾಷ್ಟ್ರಗಳೂ ಬಲಿಯಾದವು. ಕಂಪನಿಗಳು ಲಾಕ್ ಔಟ್ ಘೋಷಿಸಿದವು. ಕಂಪನಿಯಿಂದ ಕೊಡ ಮಾಡಿದ್ದ ಷೇರನ್ನೂ, ತನ್ನ ಗಳಿಕೆಯ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿದ್ದ ಮಹೀಧರ ಕಣ್ಣು ಬಿಡುವುದರೊಳಗೆ ಭಿಕಾರಿ ಆಗಿದ್ದ. ಕೊಂಡಿದ್ದ ಮನೆಯನ್ನು ಮೂರು ಡಾಲರ್ ಗೂ ಕೊಳ್ಳುವವರಿರಲಿಲ್ಲ. ಉಳಿಸಿದ್ದ ಅಲ್ಪಸ್ವಲ್ಪ ಹಣ ಸಾಲಕ್ಕೆ ವಜಾ ಆಗಲಿತ್ತು. ಅಲ್ಲಿಯ ನಾಗರಿಕರೇ ಆಗಿ ಬಿಟ್ಟಿದ್ದರಿಂದ ಇವರನ್ನು ಸುಲಭವಾಗಿ ಭಾರತಕ್ಕೆ ಕಳಿಸುವಂತೆಯೂ ಇರಲಿಲ್ಲ. ಭಾರತೀಯ ರಾಯಭಾರಿ ಕಛೇರಿ ದೃಢಪಡಿಸಿದರೆ ಮಾತ್ರ ತುರ್ತು ಅಗತ್ಯದ ಮೇರೆಗೆ ಕಳಿಸಿಕೊಡಲಾಗುವುದು ಎಂದು ವಿಮಾನ ನಿಲ್ದಾಣ ಮಾಹಿತಿ ಕೊಟ್ಟಿತ್ತು. ಮಹೀಧರ ಒಂದು ನಿರ್ಧಾರಕ್ಕೆ ಬಂದಿದ್ದ. ಹೇಗೂ ಅಪ್ಪನ ಹೆಸರಿನಲ್ಲಿರುವ ಮನೆ ಒಳ್ಳೆ ಬೆಲೆಗೆ ಮಾರಾಟವಾಗುತ್ತೆ. ಆ ದುಡ್ಡಿನಲ್ಲಿ ಹಿರಣ್ಮಯಿಯ ಅಪ್ಪನ ಹಳ್ಳಿ ಹತ್ತಿರ ಒಂದು ಸಣ್ಣ ಮನೆ ಕಟ್ಟಿದರೆ ಉಳಿದ ಹಣದಲ್ಲಿ ಜೀವನ ಸಾಗಿಸಬಹುದು ಎಂದು ಲೆಕ್ಕಾಚಾರ ಹಾಕಿ ವಿಮಾನ ಯಾನ ಸಂಸ್ಥೆಗೆ ಈ ಮೇಲ್ ಮಾಡತೊಡಗಿದ.
 
ಸಂಜೆಗೆ ಅಲ್ಲಿಂದ ಬಂದ ಈ ಮೇಲ್ ನೋಡಿ ಮಹಿ ಪಾತಾಳಕ್ಕೆ ಕುಸಿದ. ಅದರಲ್ಲಿ "ನೀವು ತಿಳಿಸಿದಂತೆ ಭಾರತದಲ್ಲಿ ನಿಮ್ಮ ತಂದೆಗೆ ಯಾವ ತೊಂದರೆಯೂ ಆಗಿಲ್ಲ ಅವರು ಆರೋಗ್ಯವಾಗಿಯೇ ಇದ್ದಾರೆಂದು ಭಾರತೀಯ ರಾಯಭಾರಿ ಕಛೇರಿಯಿಂದ ಮಾಹಿತಿ ಬಂದಿದೆ. ನಿಮ್ಮ ಮನವಿ ಪುರಸ್ಕರಿಸದಿದ್ದುಕ್ಕಾಗಿ ವಿಷಾದಿಸುತ್ತೇವೆ" ಎಂಬ ಒಕ್ಕಣೆ ಇತ್ತು.
 
ಮನೆಗೆ ಬಂದು ಸೋಫಾ ಮೇಲೆ ಕುಳಿತ ಮಹಿ ಲ್ಯಾಪ್ ಟಾಪ್ ಓಪನ್ ಮಾಡಿದರೆ ಅಪ್ಪನಿಂದ ಬಂದ ಈ ಮೇಲ್ ಬಂದಿದುದರ ಮಾಹಿತಿ ಎದುರಿಗಿತ್ತು. ಲಗುಬಗೆಯಿಂದ ಮೇಲ್ ಓಪನ್ ಮಾಡಿ ಓದತೊಡಗಿದ. "ಮಹೀಗೆ ಸವಿನೆನಪುಗಳು, ರಾಯಭಾರ ಕಛೇರಿಯಿಂದ ಈಗಷ್ಟೇ ಫೋನ್ ಬಂದಿತ್ತು. ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು. ಕಾರಣವೇನೆಂದು ಕೇಳಿದ ಮೇಲೆ ಉತ್ತರಿಸಿದರು. ನೀನು ಇಲ್ಲಿ ನಾನು ತೀರಾ ಅಸ್ವಸ್ಥಗೊಂಡು ಈಗಲೋ ಆಗಲೋ ಎಂಬ ಸ್ಥಿತಿಯಲ್ಲಿರುವುದಾಗಿಯೂ, ಒಬ್ಬನೇ ಮಗನಾಗಿರುವುದರಿಂದ ತನಗೆ ಭಾರತಕ್ಕೆ ತೆರಳಲು ಅನುಮತಿ ನೀಡಬೇಕೆಂದು ನೀನು ಕೇಳಿದ್ದನ್ನು ತಿಳಿಸಿದರು. ಅವರಿಗೆ ಉತ್ತರಿಸಿ ನಿನಗೆ ಈ ಪತ್ರ ಬರೆಯುತ್ತಿದ್ದೇನೆ. ನೀನು ಕರೆಯುತ್ತಿದ್ದ DIRTY INDIA ಇಂದು ಮತ್ತಷ್ಟು ಸಂಕಷ್ಟದಲ್ಲಿದೆ. ಅದರ ಸಂಕಷ್ಟವನ್ನು ನೀವು ಬಂದು ಮತ್ತಷ್ಟು ಹೆಚ್ಚು ಮಾಡುವುದು ಬೇಡ. ನಾನಿದ್ದ ಮನೆ ಪಕ್ಕದಲ್ಲಿಯೇ ನರ್ಸಿಂಗ್ ಹೋಮ್ ನ್ನು ಸರ್ಕಾರ ತುರ್ತು ಅಗತ್ಯದ ಮೇರೆಗೆ ವಶಕ್ಕೆ ತೆಗೆದುಕೊಂಡಿದೆ ರೋಗ ಪೀಡಿತರನ್ನು ನೋಡಿಕೊಳ್ಳಲು ಪ್ರತ್ಯೇಕ ವಾರ್ಡ್ ಗಳ ಅಗತ್ಯವಿರುವುದರಿಂದ ನನ್ನ ಕೆಳಗಿನ ಮನೆಯ ಕೋಣೆಗಳನ್ನು ಬಿಟ್ಟುಕೊಟ್ಟು ಮೇಲಿನ ಒಂದು ಕೋಣೆಯಲ್ಲಿದ್ದೇನೆ. ಅಂದ ಹಾಗೆ ನಾನು ಕೋಲಾರದಲ್ಲಿದ್ದಾಗ ಪಕ್ಕದ ಮನೆಯಲ್ಲಿದ್ದ ನರ್ಸ್ ಮಗ ಈಗ ಡಾಕ್ಟರ್ ಆಗಿ ಇಲ್ಲಿಗೇ ಬಂದಿದ್ದಾನೆ. ಇಲ್ಲಿಯ ಸುಕ್ಷೇಮ ಟ್ರಸ್ಟ್ ಗೆ ಅವರೇ ಕಾರ್ಯದರ್ಶಿ. ಆ ಟ್ರಸ್ಟ್ ಇಲ್ಲಿಯ ನರ್ಸಿಂಗ್ ಹೋಂನ್ನು ಕೊಂಡುಕೊಂಡಿದೆ. ಅವನ ತಾಯಿಯೂ ಜೊತೆಯಲ್ಲಿದ್ದಾರೆ. ಮನೆ ತಮಗೇ ಮಾರಿದರೆ ಮೂರನೆ ಮಹಡಿಯಲ್ಲಿ ನಿಮಗೊಂದು ರೂಂ ಕಟ್ಟಿ ಕೊಡುತ್ತೇವೆ. ಊಟವೆಲ್ಲಾ ನಮ್ಮಲ್ಲಿಂದಲೇ ಕಳಿಸುತ್ತೇವೆ ಅಂತ ಹೇಳಿದರು. ಗಿರಿಜಾ ಹೋದ ಮೇಲೆ ನಾನೂ ಒಂಟಿ, ಎಲ್ಲಿಗೆ ಅಂತ ಹೋಗಲಿ? ನೀನು ಹೇಗೂ DIRTY INDIA ಎಂದು ಇಲ್ಲಿಗೆ ಬರಲ್ಲ. ಹಾಗಾಗಿ ಅವರು ತಿಳಿಸಿದಂತೆ ಅವರಿಗೇ ಈ ಮನೆ ಕೊಡಲು ನಿರ್ಧರಿಸಿದ್ದೇನೆ. ಈಗ ಸಂಕಷ್ಟದ ಕಾಲದಲ್ಲಿ ನಮ್ಮ ಜನರಿಗೆ ಇದು ಉಪಯೋಗಕ್ಕೆ ಬಂದಿರುವುದು ನೋಡಿ ನನ್ನ ನಿರ್ಧಾರ ಸರಿಯೆನಿಸುತ್ತಿದೆ. ನಿನ್ನ ತಾಯಿ ಸತ್ತಾಗ ನೆನಪಾಗದ ಈ ಭಾರತ ಈಗ ನಿನ್ನ ನಿನ್ನ ಸಂಸಾರದ ಉಳಿವಿಗೆ ಗಂಡಾಂತರ ಬಂದಾಗ ನೆನಪಾಗುತ್ತಿದೆಯಲ್ಲವೇ? Highly hygenic, cultured civility, cleanest ಎಂದು ಕೊಂಡಾಡುತ್ತಿದ್ದ ದೇಶ ಈಗ ಇದ್ದಕ್ಕಿದ್ದಂತೆ ಬೇಡವಾಯ್ತೇ? ಅಲ್ಲಿಯ CLEANLYNESS, CIVILISED CULTURE ನಿನ್ನನು ಕಾಪಾಡಲಾರದಾಯ್ತೆ? ಇಲ್ಲಿಯ ಜನ ಮೇಲ್ನೋಟಕ್ಕೆ ಕೊಳಕರಿರಬಹುದು. ಆದರೆ ಹೃದಯವಂತರು. ಮೊನ್ನೆ ನಾನು ವಾಕಿಂಗ್ ಹೋದವನು ತಲೆ ತಿರುಗಿ ಬಿದ್ದಿದ್ದಾಗ ಇಲ್ಲಿನ ಜನರೇ ನನ್ನನ್ನು ಇಲ್ಲಿಗೆ ತಂದು ಸೇರಿಸಿ ಆರೈಕೆ ಮಾಡಿದ್ದರು. ನೀನು ಹತ್ತಿರದಲ್ಲಿ ಇಲ್ಲ ಎನ್ನುವ ಕೊರತೆ ನನಗೆ ಅನ್ನಿಸಲೇ ಇಲ್ಲ. ಅದಕ್ಕಾಗಿ ಈ ಮನೆಯನ್ನು ಆ ಟ್ರಸ್ಟ್ ಗೆ ದಾನ ಮಾಡಬೇಕು ಅಂತಿದ್ದೇನೆ. ಈ ದೇಶದ ಮಣ್ಣಿನಲ್ಲಿ ನಾನು ಗಳಿಸಿದ ಆಸ್ತಿ ಈ ದೇಶವನ್ನು ಪ್ರೀತಿಸುವವರ ಕೈಗೇ ಸೇರಲಿ. ಇಲ್ಲಿ ಹುಟ್ಟಿ ಇಲ್ಲಿಯ ತಾಯ ಹಾಲ ಕುಡಿದು ಈ ಮಣ್ಣಿನ ಅನ್ನ ತಿಂದು ಒಳ್ಳೆಯ ವಿದ್ಯೆ ಪಡೆದ ಕೃತಜ್ಞತೆ ಸ್ವಲ್ಪವೂ ಇಲ್ಲದೇ ಈ ದೇಶವನ್ನೇ DIRTY ಎಂದು ಹಳಿಯುವವರಿಗೆ ಇಲ್ಲಿನ ಆಸ್ತಿ ಕೊಟ್ಟು ನಾನೂ ಪಾಪಿಯಾಗಲಾರೆ ಒಂದು ವೇಳೆ ನಾನು ಈ ಸಂಕಷ್ಟದಲ್ಲಿ ಮೃತಪಟ್ಟರೂ ಇಲ್ಲಿಯ ಜನರೇ ನನಗೆ ಅಂತ್ಯ ಸಂಸ್ಕಾರ ಮಾಡುತ್ತಾರೆ. ನೀನು ಬಂದು ಇಲ್ಲಿ DIRTY ಆಗುವುದು ಬೇಡ. ಅಲ್ಲಿಯೇ ಚೆನ್ನಾಗಿರು....... ಇಂತಿ ನಿನ್ನ DIRTY INDIA ದ HEALTHY ತಂದೆ ಎಂದು. ಒಕ್ಕಣೆ ಮುಗಿಸಿದ್ದರು.
 
ಐ.ಪಾಡಿನಲ್ಲಿ ಯೂ ಟ್ಯೂಬ್ ನೋಡುತ್ತಿದ್ದ ಮಗ ಶಾಲಿವಾಹನ "Dad ನಮಕ್ ಹರಾಮ್ ಎಂದರೆ ಏನು? ಈಗ ಇದರಲ್ಲಿ ಆ ಹೆಸರಿನ ಒಂದು ಸಿನಿಮಾ ನೋಡಿದೆ" ಎಂದ. ಉತ್ತರಿಸಲಾಗದೆ ಮಹೀಧರ ಹಿರಣ್ಮಯಿ ಕಡೆ ನೋಡತೊಡಗಿದ.

--ಅ.ಸು.ರವೀಂದ್ರ, ಶಿವಮೊಗ್ಗ. (ವ್ಯಾಟ್ಸಾಪ್ ಕೃಪೆ)

No comments:

Post a Comment